Sunday, January 13, 2013

ಕನಸು





ಅದೆಷ್ಟು ಕನಸುಗಳನು
ಹೂತ್ತಿಟ್ಟೆ
ನನ್ನೆದೆಯೊಳಗಿಳಿದು...
ಬಣ್ಣವಿಲ್ಲ, ರೂಪವಿಲ್ಲ
ಬಲೆಗೆ ಬಿದ್ದ
ಹೆಬ್ಬುಲಿಯಂತೆ
ಕನಲುತ್ತಿದ್ದೇನೆ


ಯಾರೋ ಕೂಗಿದ ಸ್ವರ
"ಹೆಣ ಹೆತ್ರಪ್ಪಾ, ಹೊತ್ತಾತು"
ಹೆಸರಿದ್ದವ; ಜತೆಯಲಿದ್ದವ
ಪ್ರೀತಿಸಿದವ
ಸತ್ತ ಮರುಗಳಿಗೆಯಲಿ
ಹೆಣವಾದನೆಂದು
ಮನಸು ಮರುಗಿತು


ಅಲ್ಲೊಬ್ಬ ವ್ಯಕ್ತಿ

ಕುರುಚಲು ಗಡ್ಡ, ಗಿಡ್ಡ ದೇಹ
ಗುಳಿ ಸೇರಿದ ಕಣ್ಣು
ಬಾಗಿದ ಬೆನ್ನು, ಮೂಳೆಗಳೆಲ್ಲ
ಮೈ ಸೀಳಿ, ಹೊಟ್ಟೆ ಬೆನ್ನಿಗಂಟಿದೆ

ಬೀಸಾಡಿದ ಕಸ, ಕಾಗದ
ಪ್ಲಾಸ್ಟಿಕ್ ಚುರುಗಳನು
ಆಯ್ದು, ಹೊತ್ತು ಸಾಗಿದ್ದಾನೆ
ಯಾವ ಕಡೆಗೋ, ಯಾವ ದಿಕ್ಕಿಗೋ


ತಾವಿಲ್ಲದೆ, ಸೂರಿಲ್ಲದೆ
ಬಳಲಿದ ಅಲೆಮಾರಿ ನಾನು
ಬೆಚ್ಚಗೆ ನಿನ್ನೊಳಗಿಳಿದು
ಯಾವುದೋ ಹುಡುಕಾಟ
ನಡೆಸುತ್ತಿದ್ದೇನೆ
ನೀನು ನಭವನ್ನೇ ದಿಟ್ಟಿಸುತ್ತಿದ್ದಿ
ಗುಡುಗು, ಸಿಡಿಲಿಗೆ
ಮೋಡ ಚದುರಿ
ಭೂವಿಗೆ ಇಳೆ ತರುವ ಕಾಯುವಿಕೆಯಲಿ...

ನಾನೋ...
ಸಮುದ್ರದಲೆಗಳು ಅಪ್ಪಳಿಸುವಂತೆ
ನಿನ್ನೊಳಗೆ ಮತ್ತೂ...
* * *
 ಗೆಜ್ಜೆಯ ಸದ್ದು ಕಳಚಿ ಬಿತ್ತು!

Wednesday, November 14, 2012

ನಿವೇದನೆ



ನನ್ನ ನೆನಪು
ಬಾರದಿರಲಿ
ನಿನ್ನ ಹರುಷದ ಹೊನಲಲಿ...
Because
ನಾ ಎಲ್ಲಿ ಕಳೆಗುಂದಿಬಿಡುವೆನೆಂಬ ಭಯ!

Saturday, November 3, 2012

ಹನಿ ಹನಿ



ನೀನು ಮಾತಾಗುತೀಯಾ...
ನಗುವಾಗುತೀಯಾ...
ನೆನಪಾಗುತೀಯಾ...
ಮೌನಿಯಾಗುತೀಯಾ...
ಆಗ ನಾನು ನೀನಾಗುವೆ

ನನ್ನೆಲ್ಲಾ ಅಸ್ಮಿತೆ ಕಳಚಿ
ತಿಳಿಯಾಗುವುದು
ಅಂತಃಕರಣದಲಿ...

* * *

ಸತ್ಯಗಳು ಬೆತ್ತಲಾಗುತಿವೆ;
ಬೆಳಕಾಗುತಿವೆ
ಸುಳ್ಳಿನ ಅಂಧಕಾರವನ್ನು
ಸುರುಳಿಕಟ್ಟಿ
ತೀರಾದ ಅಹಂಗಳನ್ನು ಸ್ಫೋಟಗೊಳಿಸಿ...

* * *

ಮತ್ತೆ ಮತ್ತೆ...
ಎದುರುಗೊಳ್ಳುವ
ಎದೆಯ ದನಿಗೆ
ಊಳಿಡುವ
ನಿನ್ನ ಸಹಸ್ರ ನೆನಕೆ
ತಪ್ಪಿದರೂ ತಪ್ಪದಂತೆ
ಮತ್ತೆ ಮತ್ತೆ
ಬಯಸುತಿದೆ...

Friday, October 26, 2012

ಒಂದಿಷ್ಟು ಹನಿಗಳು...



ಪದಗಳೊಂದಿಗೆ
ಸರಸಕ್ಕೆ ನಿಂತ ಕವಿ
ವಿರಹದೊಂದಿಗೆ
ಬಿಕ್ಕುತ್ತಿದ್ದಾನೆ....
* * *
ಬೆಳಕು ಕಿಟಕಿಯಿಂದಾಚೆ
ದೂಡುತ್ತಿವೆ
ಕತ್ತಲ ನುಂಗುತ್ತಾ...
* * *
ತುಟಿಯಂಚಿನಲಿ
ನಿಂತ ಮಾತು
ಕರಗುತಿದೆ
ಮೌನದೊಳಗೆ
* * *
ಕನಸುಗಳೀಗ
ಬಿಕರಿಯಾಗುತಿವೆ
ತ್ರಾಣವಿಲ್ಲದ
ನಿದ್ರೆಯೊಳಗೆ...
* * *
ವಿಲಾಪ-ಕಲಾಪ
ಜತೆಜತೆಯಲಿ
ನಂಬಿಕೆಯ
ಬೇಲಿಗಳನು ಹಾರುತಿವೆ
* * *
ಆಸೆಗೆ ಮೈಯೊಡ್ಡಿ
ಸುತ್ತಿದ ಕಾರುಬಾರು
ನಾಳೆಯ ನೆಮ್ಮದಿಯನು
ಬಯಸುತಿವೆ...
* * *
ಮತ್ತೆ ಮತ್ತೆ ಕಳೆದುಕೊಳ್ಳುತಿವೆ
ಆತ್ಮ ಮತ್ತು ದೇಹಗಳೆರಡು
ಸಂಬಂದಗಳನ್ನು
ದಾಟಿ ನಿಂತು....

Wednesday, October 17, 2012

ಯಾಕೆ ಹೊತ್ತಿಸಿದೆ ಬೆಂಕಿ ನನ್ನೊಳಗೆ...




ಯಾಕೆ ಹೊತ್ತಿಸಿದೆ
ಬೆಂಕಿ ನನ್ನೊಳಗೆ...

ಸುಡು ಎದೆಯಲಿ
ಉರಿದು ಕರಕಲಾದ
ಜೀವರೂಪಗಳ ನೆನಪು....
ಅರ್ಥಗಳಿಗೆ ನಿಲುಕದ
ಸಂಬಂಧಗಳಲಿ
ನಂಬಿಕೆಯು ಕಳಚುವಂತೆ...

ಮತ್ತದೆ ಎದೆಯಲಿ
ಸಣ್ಣ ಉರಿ;
ಸುಟ್ಟ ದೇಹದ ವಾಸನೆ
ಬಿಸಿಯುಸಿರು
ಒಂದಿಷ್ಟು ಸಿಟ್ಟು
ತಲ್ಲಣಗಳನ್ನು ಸೃಷ್ಟಿಸುವಂತೆ...

ಇಲ್ಲಿ ಅವರು
ತೊಟ್ಟ ಉಡುಗೆಯು
ತಪ್ಪುಗಳನ್ನು ಬಚ್ಚಿಡುತ್ತಿವೆ
ನೋಟಗಳಲಿ....
ಮಾತು ಮರೆಮಾಚಿ ನಿಂತಿದೆ
ಅಸ್ಪಷ್ಟ ನಗುವಿನಲಿ...

ಯಾಕೆ ಹೊತ್ತಿಸಿದೆ
ಬೆಂಕಿ ನನ್ನೊಳಗೆ
ಹೊತ್ತು ಮುಳುಗುತ್ತಾ
ಬೆಳಕು ಹಿಂಗುತ್ತಾ
ನಲುಗುತಿದೆ....

Sunday, July 29, 2012

ನಾನು

ನಿನ್ನ ನಗುವಿನಲಿ
ಇಲ್ಲದ ನಾನು
ಕಣ್ಣಂಚಿನಲಿ
ಕರಗುವ
ನಿರಾಸೆಯ
ಹನಿಗಳಲಿ
ಜಿನುಗುತಿರುವೆ....

ಪುಟ್ಟದಾಗಿ ದ್ವೇಷಿಸುತ್ತೇನೆ ನಿನ್ನ...


ಧೋ ಎಂದು ಸುರಿವ
ಮಳೆಯಲಿ
ತೊಯ್ದು ಹರಿದರೂ
ನನ್ನದೆಯಲಿ
ನಿನ್ನ ಹೆಜ್ಜೆ
ಗುರುತುಗಳು
ದಾರಿ ಆಯ್ದಿವೆ....

ತುಂಡು ಸೂಜಿ
ದಾರ ಬೆಸೆದು
ಅರಿದ ನಿನ್ನ ಒಡಲನು
ಒಲೆಯುತ್ತಾ ಕೂತ ದಿನಗಳು
ದಾರಿಯುದ್ದಕ್ಕೂ ಬೇಲಿಯಾಗಿವೆ...

ಹೂತ್ತಿಟ್ಟಿರುವ ಮನುಷ್ಯತ್ವವನು
ಹಾರೆ, ಗುದ್ದಲಿ ಹಿಡಿದು
ಮಡಲಲ್ಲಿ ಬಗೆವ
ಕಂಡ ಕನಸುಗಳು
ದಾರಿಯಲ್ಲಿ ಲೀನವಾಗಿವೆ...

ಎವೆಯಿಕ್ಕದೆ
ತಾಗಿದ ನೋಟಗಳಲಿ
ಬೆವರುತ್ತಾ ಹರಿದ
ನಲ್ಮೆಯ ಕ್ಷಣಗಳು
ಕೊನೆಗಾಣದ
ದಾರಿಯಲ್ಲಿ ಸಾಗಿವೆ...

ಸುಳಿದಾಡುವ ನೀನು
ನನ್ನದೆಯಲಿ
ಕಾಪಿಡುತ್ತಾ
ಹಿಡಿಯಷ್ಟು ಪ್ರೀತಿಸಿದ
ನೆನಪುಗಳು
ದಾರಿ ಮಾಡಿದೆ....

ಪುಟ್ಟದಾಗಿ ದ್ವೇಷಿಸುತ್ತೇನೆ ನಿನ್ನ
ಎಡತಾಗುವ
ನಿರಂತರ ದಾರಿಯಲಿ.....