Wednesday, June 30, 2010

ಹಡೆದವ್ವನ ಗೋಳು ಕೇಳುವವರ್ಯಾರು?

ಪೋಲಿಸರು ಎಂದಕ್ಷಣ ಜನರಲ್ಲಿ ಒಳ್ಳೆಯ ಭಾವನೆ ಮೂಡುವುದು ತೀರ ವಿರಳ. ಅವರಲ್ಲಿ ನ್ಯಾಯ ಕೇಳಿ ಹೋದ ಬಡವರಿಗೆ ನ್ಯಾಯ ಸಿಕ್ಕಿತು ಎಂದು ಕನಸಿನಲ್ಲಿಯು ಕೇಳಿದ ನೆನಪಿಲ್ಲ. ತಿಳಿಯದ ಜನರಿಗೆ ಮಂಕು ಬೂದಿ ಎರಚುವ ಖಾಕಿಧಾರಿಗಳು, ರಕ್ಷಣೆ ನೀಡುವ ರಕ್ಷರೋ? ವಂಚಿಸುವ ವಂಚಕರೋ? ಏನೆಂಬುದು ನೀವೇ ನಿರ್ಧರಿಸಬೇಕು. ಜನಪ್ರತಿನಿಧಿಗಳ ಗುಲಾಮರಂತೆ ಕಾರ್ಯನಿರ್ವಹಿಸುವ ಇವರಿಂದ ಎಲ್ಲಿಯ ನ್ಯಾಯದ ನಿರೀಕ್ಷೆ ಎಲ್ಲಿ?
ಬಡ ಮಹಿಳೆ ಲಕ್ಷ್ಮವ್ವ ತನ್ನ ಮಗ ಗಿರೀಶನನ್ನು ಕಳೆದುಕೊಂಡು ಮೂರು ವರ್ಷ ಕಳೆದಿದ್ದರೂ, ಅವಳಿಗೆ ವಿಚಾರಣೆಯ ಸಂದರ್ಭದಲ್ಲಿ ಒಂದಷ್ಟು ಭರವಸೆಗಳನ್ನು ನೀಡಿದ ಪೋಲಿಸರು ಯಾವುದನ್ನು ಈಡೇರಿಸದೇ, ಅವಳನ್ನು ಅನಾಥ ಬದುಕಿಗೆ  ದೂಡಿದ್ದಾರೆ. ಇಂತಹ ಕರುಣಾಜನಕ ಕಥೆಯನ್ನು, ಕರುಳ ಬಳ್ಳಿಯನ್ನು ಕಳೆದುಕೊಂಡ ತಾಯಿ ಪಟ್ಟ ಪರಿಪಾಟಲನ್ನು ಗೆಳತಿ ಸ್ಮಿತಾ ಶಿರೂರ ಅವರು ವಿಸ್ತ್ರತವಾಗಿ ಬರೆದಿದ್ದಾರೆ. ಈ ಲೇಖನ `ಸಂಯುಕ್ತ ಕರ್ನಾಟಕ' ದಿನ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಜನಜಾಗೃತಿಯ ಸಲುವಾಗಿ ಬ್ಲಾಗ್ ನಲ್ಲಿ ಪ್ರಕಟಿಸಿದ್ದಾನೆ.

 ಸ್ಮಿತಾ ಶಿರೂರ
ಹುಬ್ಬಳ್ಳಿ: `ಏನಾದ್ರ ಮಾಡ್ರಿ... ಒಂದ ಸೂರ ಮಾಡ ಕೊಡ್ರೀ.. ಮಾಡ್ಕಂಡ ತಿಂತೀನಿ..ನನ್ ಮಗನ್ನ ಪೋಲಿಸ್ರು ಹೊಡದ ಕೊಂದ್ ಬಿಟ್ರು.... ಕೇಸ್ ಮುಚ್ ಹಾಕ್ಯಾರ್ರೀ... ಇನ್ ನನಗ ಯಾರ್ ದಿಕ್ರೀ........ ಏನಾರಾ ಮಾಡ್ರೀ...' ಹಿಂಗಂದು ಲಕ್ಷ್ಮವ್ವ ಶಿಗ್ಗಾವಿ ಕಣ್ಣೀರುಗರೆಯಹತ್ತಿ ಮೂರು ವರ್ಷಗಳೇ ಗತಿಸಿವೆ. ಕಂಬನಿ ಆರಿಲ್ಲ. ಆದರೆ ಆಡಳಿತ ಹಾಗೂ ಅಧಿಕಾರಶಾಹಿಯ ಕಲ್ಲು ಹೃದಯ ಮಾತ್ರ ಕರಗಿಲ್ಲ! 2007 ಸಪ್ಟೆಂಬರ್ 4 ರಂದು ಜೀವನಕ್ಕೆ ದಿಕ್ಕಾದ ಇದ್ದೊಬ್ಬ ಮಗ ಇದ್ದಕ್ಕಿಂದಂತೆ ಪೊಲೀಸ್ ವಿಚಾರಣೆಯ ಸಂದರ್ಭದಲ್ಲಿ ಮೃತಪಟ್ಟಾಗ ಬೆಂಗೇರಿಯ ಲಕ್ಷ್ಮವ್ವನಿಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಘಟನೆ ನಡೆದ ಮೂರು ವರ್ಷಗಳ ನಂತರವೂ ತಾಯಿಗೆ ಮಗನ ಅಗಲುವಿಕೆಯನ್ನು ಅರಗಿಸಿಕೊಳ್ಳಲಾಗಿಲ್ಲ. ಕಾರಣ.. ಕರುಳಕುಡಿ ಕಳಚಿದ್ದೊಂದು, ಅಂದಿನ ಪೊಲೀಸ್ ಅಧಿಕಾರ ಶಾಹಿ ನೀಡಿದ ಭರವಸೆಗಳು ಇನ್ನೂವರೆಗೂ ಈಡೇರದೆ ಅಸಹಾಯಕತೆಯಲ್ಲಿ ಕಾಲಕಳೆಯಬೇಕಾಗಿ ಬಂದಿರುವುದು ಇನ್ನೊಂದು.
ಬೆಂಗೇರಿಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಲಕ್ಷ್ಮವ್ವ ರಂಗಪ್ಪ ಶಿಗ್ಗಾವಿ ಅಂದು ತನ್ನ ಮೂಲ ಮನೆಯ ಬಳಿ ತೆರಳಿದ್ದಾಗ, ಮನೆಯಲ್ಲಿದ್ದ ಗಿರೀಶ(30) ನನ್ನು ಇಸ್ಪೀಟ್ ಆಡುತ್ತಿದ್ದ ಆರೋಪ ಹೊರಿಸಿ ಕೇಶ್ವಾಪುರ ಠಾಣಾ ಪೊಲೀಸರು ಕರೆದೊಯ್ದರು. ನಂತರ ಮಧ್ಯಾಹ್ನ ಸಂದರ್ಭದಲ್ಲಿ ಆತನನ್ನು ಮನೆಯ ಬಳಿಯಲ್ಲೇ ಸೋಡಾ ಫ್ಯಾಕ್ಟರಿಯೊಂದರ ಬಳಿ ಒಗೆದು ಹೋಗಿದ್ದನ್ನು ಕಂಡು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿ ಆತ ಮೃತಪಟ್ಟಿದ್ದಾನೆಂದು ಘೋಷಿಸಲಾದಾಗ, ತಾಯಿಗೆ ಸುದ್ದಿ ತಿಳಿಸಲಾಯಿತು. ಕಂಪನಿಯೊಂದರಲ್ಲಿ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದ ಈ ಏಕೈಕ ಮಗನನ್ನು ಕಳೆದುಕೊಂಡ ತಾಯಿಯ ರೋದನ ಮುಗಿಲು ಮುಟ್ಟಿತ್ತು. ಪೊಲೀಸ್ ದೌರ್ಜನ್ಯದಿಂದಾಗಿ ಗಿರೀಶ ಮೃತಪಟ್ಟನೆಂದು ತಿಳಿದು ಸ್ಥಳೀಯರು, ಸಮಾಜ ಸದಸ್ಯರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ ತಾಯಿಗೆ ಪರಿಹಾರ ಕೊಡಲು ಆಗ್ರಹಿಸಿದರು. ಒಂದೆರಡು ದಿನಗಳ ಕಾಲ ಆ ಭಾಗದಲ್ಲಿ ಉದ್ವಿಗ್ನ ಸ್ಥಿತಿಯೂ ನಿಮರ್ಾಣಗೊಂಡಿತ್ತು.
ಅಂದಿನ ಜಿಲ್ಲಾಧಿಕಾರಿ ಎಂ.ಎಸ್.ಶ್ರೀಕರ ಹಾಗೂ ಪೊಲೀಸ್ ಆಯುಕ್ತ ನಾರಾಯಣ ನಡಮನಿ ತಕ್ಷಣ ಒಂದು ಲಕ್ಷ ರೂ.ಗಳ ಪರಿಹಾರ ಹಣ ಲಕ್ವ್ಮವ್ವಗೆ ದೊರೆಯುವಂತೆ ಮಾಡಿದರು. ಇನ್ನೂ ಹೆಚ್ಚಿನ ಪರಿಹಾರ, ಜಮೀನು ಹಾಗೂ ಉದ್ಯೋಗ ಕೊಡಿಸುವುದಾಗಿ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಆಶ್ವಾಸನೆಗಳನ್ನು ನೀಡಿದ್ದರು. ಆದರೆ ಅದರ ನಂತರ ಈಕೆಯೆಡೆ ಕಣ್ಣೆತ್ತಿ ನೋಡಿದವರಿಲ್ಲ. ಏನವ್ವ.... ಎಂದು ಕೇಳಿದವರಿಲ್ಲ.
ಈಗ ಲಕ್ಷ್ಮವ್ವಳ ಜೀವನ ಇನ್ನಷ್ಟು ದುಸ್ಥಿತಿಗಿಳಿದಿದೆ. ತಗಡಿನ ಬಾಡಿಗೆ ಮನೆಯಲ್ಲಿ ವಾಸ, ನಾಲ್ಕಾರು ಮನೆಗಳಲ್ಲಿ ಕಸಮುಸುರೆ ಮಾಡಿ ಬಂದ ಹಣ ಯಾತಕ್ಕೂ ಸಾಲುತ್ತಿಲ್ಲ. ವಿಧವಾ ವೇತನ 400 ರೂ. ಬರುತ್ತಿತ್ತು. ಕಳೆದ ಮೂರು ತಿಂಗಳಿಂದ ಅದೂ ಇಲ್ಲ. ಈಗಲೇ ಹೀಗಾದರೆ ಇನ್ನಷ್ಟು ವಯಸ್ಸಾದ ಮೇಲೆ ನೋಡೋರ್ಯಾರು... ಎಂಬ ಚಿಂತೆ ಈಕೆಯನ್ನು ಕಿತ್ತು ತಿನ್ನತೊಡಗಿದೆ.
ಲಕ್ಷ್ಮವ್ವ ಓದಿದವಳಲ್ಲದಿದ್ದರೂ ಪ್ರಕರಣದ ನಂತರ ಕೈಚೆಲ್ಲಿ ಕುಳಿತಿಲ್ಲ. ತನಗೊಂದು ಆಸರೆ ಒದಗಿಸಿಕೊಡಬೇಕೆಂದು ಅಂದಿನಿಂದ ಇಂದಿನವರೆಗೂ ಕಂಡಕಂಡವರಲ್ಲಿ ಮನವಿ ಮಾಡಿದ್ದಾಳೆ. ಕಾಡಿಬೇಡಿದ್ದಾಳೆ. ಕೇಳಿದವರೆಲ್ಲ ಹೇಳಿದ್ದು ಒಂದೇ ಉತ್ತರ..... ನಿನಗೆ ಒಂದು ಲಕ್ಷ ರೂ. ಕೊಟ್ಟಾಗಿದೆಯಲ್ಲಮ್ಮ.....? ಆ ಪ್ರಕರಣ ಇನ್ನು ಮುಗಿದ್ಹಾಂಗೇ ಬಿಡು... ಎಂದು. ನಡಮನಿಯವರ ನಂತರ ಬಂದು ಪೊಲೀಸ್ ಆಯುಕ್ತರು, ಜಿಲ್ಲಾ ಉಪವಿಭಾಗಾಧಿಕಾರಿ, ಅಂದಿನ ಹಾಗೂ ಇಂದಿನ ಜಿಲ್ಲಾಧಿಕಾರಿಗಳು, ಮಾನವ ಹಕ್ಕು ಆಯೋಗ, ಮಹಾನಗರ ಪಾಲಿಕೆ ಆಯುಕ್ತರು, ಸಚಿವ ಜಗದೀಶ ಶೆಟ್ಟರ, ಸಿಒಡಿ ತನಿಖೆಗೆ ಬಂದಿದ್ದ ಅಧಿಕಾರಿಗಳು, ಕಾನೂನು ಸೇವಾ ಸಮಿತಿ.. ಹೀಗೆ ಎಲ್ಲರಲ್ಲೂ ಮನವಿ ಮಾಡುತ್ತಲೇ ಇದ್ದಾಳೆ. ಆದರೂ... ಎಲ್ಲರೂ ಕೈಚೆಲ್ಲಿದ್ದಾರೆ.
ಉದ್ಯೋಗ, ಜಮೀನು ಕೊಡಿಸುತ್ತೇನೆಂದವರೆಲ್ಲ ಘಟನೆ ನಡೆದ ಕೆಲ ದಿನಗಳಲ್ಲೇ ಜಾರಿ ಕೊಂಡಿದ್ದಾರೆ. ಸಿಒಡಿ ತನಿಖೆಯೂ ಮುಚ್ಚಿ ಹೋಗಿದೆ. ತನಿಖೆ ಏನಾಯಿತೆಂದು ನೋಡಲು ಬೆಂಗಳೂರಿಗೆ ಎರಡೆರಡು ಬಾರಿ ಓಡಾಡಿದ ಲಕ್ಷ್ಮವ್ವಗೆ ತನಿಖೆಯ ವಿವರವನ್ನೂ ನೀಡದೆ ಬರಿಗೈಯಲ್ಲಿ ಕಳಿಸಲಾಗಿದೆ.
ಪೊಲೀಸ್ ಇಲಾಖೆಯ ಮೇಲೆ ಆಕ್ರೋಶ ವ್ಯಕ್ತಪಡಿಸುವ ಲಕ್ಷ್ಮವ್ವ `ತಪ್ಪ ಮಾಡ್ದೋರು ಆರಾಮಾಗಿ ಓಡಾಡಾಕ್ಹತ್ತಾರ. ಏನೂ ತಪ್ಪ ಮಾಡದ ನನ್ ಕಂದನ್ನ ಹೊಡದ ಕೊಂದ್ರು. ನಾನ್ ಪೊಲೀಸರ ಮೇಲೇನೇ ಕೇಸ್ ಹಾಕ್ಸತೀನಿ...' ಎನ್ನುತ್ತಾಳಲ್ಲದೆ, ಈಗಿನ ಪೊಲೀಸ್ ಆಯುಕ್ತರಿಗೂ ಮತ್ತೆ ಮನವಿ ಮಾಡ್ತೀನಿ.... ಅವರಾದ್ರೂ ದಾರಿ ತೋರ್ತಾರೋ ಏನೋ... ಎಂದು ಆಸೆ ವ್ಯಕ್ತಪಡಿಸುತ್ತಿದ್ದಾಳೆ.
ಆಶ್ರಯ ಮನೆಗಾಗಿ ಅಜರ್ಿ ಬರೆಯಿಸಿಕೊಳ್ಳಲಾಗಿದೆ. ಕೆಲ ಸಂಘಟನೆಗಳ ಬಳಿ ಉದ್ಯೋಗಾವಕಾಶಕ್ಕಾಗಿ ಮನವಿ ಸಲ್ಲಿಸಲಾಗಿದೆ ಎಂದು ಕೇಶ್ವಾಪುರ ಪೊಲೀಸ್ ಠಾಣೆಯಿಂದ ಲಿಖಿತವಾಗಿ ಒಂದು ಪತ್ರ ಬರೆದುಕೊಟ್ಟಿದ್ದಾರೇನೋ ನಿಜ. ಅದ್ಯಾವುದಕ್ಕೂ ಇನ್ನೂ ಕಿಮ್ಮತ್ತು ಬಂದಿಲ್ಲ. ಲಕ್ಷ್ಮವ್ವಳ ಸಂಕಟಕ್ಕೆ ಪರಿಹಾರ ದೊರಕುವುದೆ? ಮಹಿಳಾ ಸಂಘಟನೆಗಳಾದರೂ ಅವಳಿಗೆ ಆಧಾರ ಒದಗಿಸಿಯಾವೇ?

No comments: