Tuesday, June 1, 2010

ಅಮಾಯಕ ಗೆಳತಿ ಕೊಂದರೇ ಪಾಪಿ ಪೊಲೀಸರು!

ಈ ಸಾವಿಗೆ ನ್ಯಾಯ ಎಲ್ಲಿದೆ...

ಇತ್ತೀಚೆಗೆ ತಾನೆ ಬಾಲ್ಯದ ಗೆಳತಿ ವಿಷ ಕುಡಿದು ಸಾವನ್ನಪ್ಪಿದ್ದಾಳೆ ಎಂಬ ವಿಷಯ ತಿಳಿದು ದಂಗಾದೆ. ಅದು ಕಲಾಸಿಪಾಳ್ಯ ಎಂಬ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೇ ವಿಷ ಕುಡಿದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು ತಂದುಕೊಂಡಳು ಎಂದು. ಹೀಗೆ ಆರು ತಿಂಗಳ ಹಿಂದೆ ಒಮ್ಮೆ ಖಾಸಗಿ ಬಸ್ಸಿನಲ್ಲಿ ಊರಿಗೆ ಪ್ರಯಾಣ ಬೆಳೆಸಿದ್ದಾಗ ಅವಳು ಸಿಕ್ಕು ’ಹೇಯ್ ಪುರುಷೋತ್ತಮ ಅಲ್ವ ನೀನು’ ಎಂದು ನಸುನಕ್ಕಿದ್ದಳು. ತಾನು ಪೊಲೀಸ್ ಇಲಾಖೆಯಲ್ಲಿದ್ದು, ಕಲಾಸಿಪಾಳ್ಯ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದ್ದಳು. ಅವಳ ಉಡುಪು ಕಂಡಾಗ ಅವಳು ಪೊಲೀಸ್ ಪೇದೆಯೇ ಎಂದೆನಿಸಿತ್ತು. ಈಗ ಅವಳು ನಮ್ಮೊಂದಿಗಿಲ್ಲ. ಅವಳ ಸಾವು ನಾಟಕೀಯವಾಗಿ ಅಂತ್ಯಕಂಡಿದ್ದು, ಅವಳ ಸಾವಿನ ಕಾರಣವನ್ನು ಪೊಲೀಸ್ ಇಲಾಖೆಯೇ ಕೊಂದು ಬಿಟ್ಟಿತು ಎಂಬ ಸಂಗತಿಗಳು ಕೇಳಿ ಬಂದವು. ಏಕೆಂದರೆ ಅಲ್ಲೆ ಕಳ್ಳರಿದ್ದಾರೆ. ಅದು ಕಲಾಸಿಪಾಳ್ಯ ಠಾಣೆ. ಬೆಂಗಳೂರಂತ ಮಾಯನಗರಿಯಲ್ಲಿ ಗಬ್ಬುನಾರುತ್ತಿರುವ ಪ್ರದೇಶವೊಂದರ ಠಾಣೆ!
ಈ ದುರ್ಘಟನೆಗೆ ಜೀವತ್ತೆತ್ತವಳು ನಮ್ಮ ಬಾಲ್ಯದ ಗೆಳತಿ ಶಿಲ್ಪ ಬಿ.
ಅವಳ ಸಾವಿನ ಸುತ್ತ ಕಾರಣಗಳನ್ನು ಹುಡುಕುತ್ತಾ ಹೋದರೆ ಹಲವು ಅನುಮಾನಗಳು ಹುಟ್ಟುಕೊಳ್ಳುತ್ತವೆ. ಕಲಾಸಿಪಾಳ್ಯದ ಪೊಲೀಸರ ಮೇಲಿದ್ದ ಅನುಮಾನ ಅವಳ ಗಂಡ ಪುಟ್ಟನ ಕಡೆ ತಿರುಗಿ, ಅವನ ಮೇಲೆಯೇ ಆರೋಪವನ್ನು ಹಾಕಿ ಒಂದಷ್ಟು ದಿನ ಜೈಲಿನಲ್ಲಿಟ್ಟುಕೊಂಡು ‘ಸುಮ್ನೆ ಮನೆ ಸೆರ‍್ಕೋ’ ಎಂದು ಪೊಲೀಸ್ ವ್ಯವಸ್ಥೆ ಹೇಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇಂಥ ನೀಚ ವ್ಯವಸ್ಥೆಯ ವಿರುದ್ಧ ಎದ್ದು ನಿಲ್ಲುವ ಎಂದರೆ ಆತನ ಮುಗ್ಧ ಮಗು ಕಣ್ಣೆದುರಿಗಿದೆ. ನಿಸ್ಸಹಾಯಕನಾಗಿ ಅವಳ ಪ್ರೀತಿಯ, ತನ್ನ ಮುದ್ದು ಕಂದನಿಗಾಗಿ ಅವನು ಎಲ್ಲವನ್ನು ಹಲ್ಲುಕಚ್ಚಿ ಸಹಿಸಿಕೊಂಡು ಸುಮ್ಮನೆ ಇರುವಂತ ಅನಿವಾರ್ಯ ಸ್ಥಿತಿಯನ್ನು ನಿರ್ಮಾಣಗೊಂಡಿದೆ. ಇಲ್ಲಸಲ್ಲದ ಆರೋಪಗಳ ದಾಖಲೆ ಪಟ್ಟಿಯನ್ನು ಅವನ ತಲೆಗೆ ಕಟ್ಟಿ ಒಂದಷ್ಟು ವರುಷ ಜೈಲಿನಲ್ಲಿಯೇ ಕೂರಿಸುವ ಹೊಂಚು ಹಾಕಿದ್ದರು ಕಲಾಸಿಪಾಳ್ಯ ಠಾಣೆಯ ಪೊಲೀಸ್ ಮಂದಿ. ಆದರೆ ಅವನು ಜೈಲು ಸೇರಿದರೆ ಅವನ ಕಡೆಯವರು ಎಲ್ಲಿ ತಮ್ಮ ಮೇಲೆ ಎರಗುತ್ತಾರೆ, ಸತ್ಯಾಂಶ ಹೊರಬರುವುದೋ ಎಂಬ ಕಾರಣಕ್ಕೆ ಪೊಲೀಸರು ಅವನನ್ನು ಬೆದರಿಸಿ ಸುಮ್ಮನಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಸ್ನೇಹಿತೆ ಸಾವು ಯಾವ ಕಾರಣಕ್ಕೆ, ಎಲ್ಲಿ? ಹೇಗೆ? ನಡೆಯಿತೆಂಬ ಕುರುಹುಗಳು ಸಿಗಲಾರಂಭಿಸಿವೆ. ಆದರೆ ಇದಕ್ಕೆ ಪೂರಕ ಸಾಕ್ಷಿ ಆದಾರಗಳು ಲಭ್ಯವಾಗದೇ ಇರುವುದರಿಂದ ನಮಗೂ ಕೈಕಟ್ಟಿ ಕೂರುವಂತಾಗಿದೆ. ಈಗಾಗಲೇ ಸ್ನೇಹಿತೆಯ ಸಾವಿಗೆ ಕಾರಣರಾದ ಕಾನೂನು ಪಾಲಕರೇ ಸಾವಿನ ಕಾರಣಗಳನ್ನೆಲ್ಲ ಅವಳೊಟ್ಟಿಗೆ ಜೀವಂತ ಸಮಾಧಿ ಮಾಡಿದ್ದಾರೆ. ರಕ್ಷರ ಸೋಗಿನ ಈ ಭಕ್ಷಕರ ಬಗ್ಗೆ, ಇವರುಗಳ ನೀಚ ಬುದ್ಧಿಯ ಬಗ್ಗೆ ಸಮಾಜಕ್ಕೆ ಬಹಿರಂಗಬಾಗಬೇಕಾಗಿದೆ.
ಬಡವರ ಬಗ್ಗೆ, ಅಸಹಾಯಕರ ಬಗ್ಗೆ ಕೇವಲ ಬಣ್ಣಬಣ್ಣದ ಮಾತುಗಳನ್ನಾಡುವ ಸೋಗಲಾಡಿಗಳು, ಅನ್ಯಾಯದ ವಿರುದ್ಧ ಸೆಟೆದು ನಿಲ್ಲಲು ಅಂಜುತ್ತಿದ್ದಾರೆ. ಹೀಗಾಗಿ ಬಡವರ ಕೋಪ ದವಡೆಗೆ ಮೂಲ ಎಂಬಂತಾಗಿದೆ. ತಂದೆತಾಯಿಯನ್ನು ಕಳೆದುಕೊಂಡು ಜೀವನದಲ್ಲಿ ಏನಾದರೂ ಸಾಧಿಸಿ ಬದುಕಬೇಕೆಂಬ ಅವಳ ಬದುಕನ್ನೇ ಪೊಲೀಸ್ ಇಲಾಖೆ ಸರ್ವನಾಶ ಮಾಡಿ ಮುಗಿಸಿದೆ. ಸುಂದರವಾಗಿರುವವರ ಬದುಕು ಸುಂದರವಾಗಿರಲ್ಲ ಎಂಬುದಂತು ಅವಳ ಬದುಕಿನಲ್ಲಿ ಅಷ್ಟೆ ಸತ್ಯ. ಏಕೆಂದರೆ ಮೇಲ್ಪಂಕ್ತಿಯ, ತನ್ನ ದೌರ್ಬಲ್ಯವನ್ನರಿತ ಸಹೋದ್ಯೋಗಿಗಳ ಕಾಮಕೇಳಿ ಅವಳ ಸಾವನ್ನು ಗೆದ್ದಿದೆ. ಇದು ವಂಚನೆಯ ಮಹಾಕೂಪ ಪ್ರಪಂಚ. ಅಮಾಯಕರನ್ನು ಮರುಳುಮಾಡಿ, ತಮ್ಮ ತೇವಲನ್ನು ತೀರಿಸಿಕೊಳ್ಳುವ ಹುಂಬತನದವರು.
ಗಂಡಹೆಂಡತಿ ಜಗಳವೋ, ಅತ್ತೆ ಮಾವನ ಜಗಳವೋ, ಓರಗಿತ್ತಿಯರ ಜಗಳವಾಗಿದ್ದರೆ ಏನೋ ನಡೆದಿದೆ ಎಂಬ ಸಂಶಯವೇಳುತ್ತಿತ್ತು. ಇಲ್ಲಿ ಅದ್ಯಾವ ಗೊಡವೆಯೂ ಇಲ್ಲ. ಅತ್ತೆ ಮಾವನ ಕಾಟವಾಗಲಿ, ಓರಗಿತ್ತಿ, ನಾದಿನಿಯರ ಕಾಟವಾಗಲಿ ಇಲ್ಲ.  ಅದು ಒಂದು ಪುಟ್ಟ ಸಂಸಾರ. ಅಲ್ಲಿ ಪುಟ್ಟ, ಶಿಲ್ಪ, ಅವರ ನಾಲ್ಕು ವರುಷದ ಕಂದಮ್ಮ.
ಶಿಲ್ಪನನ್ನು ಪ್ರೀತಿಸಿ ಮದುವೆಯಾಗಿ ೯ ವರ್ಷ ಕಳೆದಿದೆ. ನನ್ನ ತಾಯಿಯನ್ನೂ ಕೂಡ ನನ್ನ ಮಗನ ವಯಸ್ಸಿನಲ್ಲಿಯೇ ಕಳೆದುಕೊಂಡಿದ್ದು. ಆಗ ನಮ್ಮ ತಂದೆ ಬೇರೆ ಮದುವೆಯಾಗಿ ನಮ್ಮನ್ನು ಬೀದಿಗೆ ಬಿಟ್ಟ.  ಈಗ ಅವಳನ್ನು ಕಳೆದುಕೊಂಡಿದ್ದೇನೆ. ಅದು ಈ ಪೊಲೀಸ್ ಇಲಾಖೆಯ ದೌರ್ಜನ್ಯದಿಂದ ಎಂದು ಶಿಲ್ಪಗಳ ಪ್ರೀತಿಯ ಪತಿ ಪುಟ್ಟ ದುಃಖವನ್ನು ಮರೆಮಾಚುತ್ತಾ ಹೇಳುತ್ತಾನೆ. ಅವನ ಮಗ ‘ಅಪ್ಪ, ಅಮ್ಮ ಯಾಕ್ ಸುಮ್ನೆ ಮಲಗಿದೆ. ಅಮ್ಮನ ಮೇಲೆ ಹೂವು ಯಾಕ್ ಹಾಕಿದ್ದಾರೆ’ ಎಂದು ಕೇಳಿದಾಗ ಜೀವ ಹಿಂಡಿ ಬರುತ್ತೆ. ಈ ನಿಸ್ಸಹಾಯಕ ಬದುಕಿದೆಯಲ್ಲ ಅದು ಯಮಯಾತನೆ. ಅವನ ಕಣ್ಣಂಚಿನಲ್ಲಿರುವ ನೀರು ಹೆಪ್ಪುಗಟ್ಟಿದ್ದವು. ಅವು ಹೊರಬರಲಾರವು. ಅದು ಬಡವರ ಕಣ್ಣೀರು. ಕೊಲೆ ಮಾಡಿ ದಕ್ಕಿಸಿಕೊಳ್ಳುವ ಅಧಿಕಾರಿಶಾಹಿಗಳ ದೌರ್ಜನ್ಯದ ಮುಂದೆ ಗಪ್‌ಚುಪ್!
ಆ ದಿನ ಮೇ ೯ನೇ ತಾರೀಖು ಎಂದಿನಂತೆ ರಾತ್ರಿ ೮.೩೦ರ ಸಮಯದಲ್ಲಿ ಫೋನ್ ಮಾಡಿ ಹೊರಟಿದ್ದೇನೆಂದು ತಿಳಿಸಿದ್ದಾಳೆ. ಪುಟ್ಟ ತನ್ನ  ಎಂದಿನ ಕೆಲಸಕಾರ್ಯಗಳನ್ನು ಮುಗಿಸಿಕೊಂಡು ಮನೆಗೆ ಹೊರಟ. ಮತ್ತೆ ರಾತ್ರಿ ೮.೪೫ರ ಸಮಯದಲ್ಲಿ ಮತ್ತೊಂದು ಕರೆ ಬಂದಿತು. ಅದು ನಿಮ್ಮ ಹೆಂಡತಿ ಸಂಜೆ ೫ಕ್ಕೆ ತಲೆ ತಿರುಗಿ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಕಲಾಸಿಪಾಳ್ಯದ ಪೊಲೀಸ್ ಪೇದೆಯೊಬ್ಬ ಕರೆ ಮಾಡಿ ಆಸ್ಪತ್ರೆಗೆ ಬರುವಂತೆ ತಿಳಿಸಿದ. ಅವಳು ಬಿದ್ದಾಗ ಪೇದೆಯೊಬ್ಬ ಆಟೋ ಮಾಡಿಕೊಂಡು ವಸಂತನಗರದಲ್ಲಿರುವ ಮಹಾವೀರ್ ಜೈನ್ ಆಸ್ಪತ್ರೆಗೆ ದಾಖಲು ಮಾಡಿದೆ ಎಂದು ತಿಳಿದುಬಂದಿದೆ. ಅವಳು ಠಾಣೆಯಲ್ಲಿಯೇ ವಿಷ ಕುಡಿದಳೊ ಏನೋ ಇನ್ನು ಸ್ಪಷ್ಟವಾಗಿಲ್ಲ. ಪುಟ್ಟ ಆಸ್ಪತ್ರೆಗೆ ಹೊರಟ. ಅಲ್ಲಿ ಅವಳನ್ನು ಕಾಣಲು, ಮಾತನಾಡಲು ಬಿಡಲಿಲ್ಲ. ಆಸ್ಪತ್ರೆಯ ಚಿಕಿತ್ಸೆಯನ್ನೂ ಬರಿಸಿದ. ಬರೋಬ್ಬರಿ ೬೦ ಸಾವಿರ ರೂ. ಹಣ ಕಳಚಿ ಬಿತ್ತು. ತಾನು ದುಡಿದ ದುಡ್ಡನ್ನೆಲ್ಲ ಸುರಿದ. ಸ್ನೇಹಿತರ, ಹಿತೈಷಿಗಳ ಹತ್ತಿರ ಸಾಲ ಪಡೆದು ಅವಳ ಚಿಕಿತ್ಸೆಗಾಗಿ ಪಣತೊಟ್ಟ. ಬೇರೆಯಾರನ್ನು ಕರೆದುಕೊಂಡು ಬಾರದಂತೆ ಪುಟ್ಟನಿಗೆ ಪೊಲೀಸರು ಆಗಾಗ ತಾಕೀತು ಮಾಡಿತ್ತಿದ್ದರು. ಪುಟ್ಟ ಯಾರನ್ನು ತನ್ನ ಜೊತೆ ಕರೆದೊಯ್ಯಲಿಲ್ಲ. ನಾವೀದ್ದೀವಿ ನೀನು ಚಿಂತಿಸಬೇಡ ಎಂಬ ಗೀಲಿಟು ಮಾತುಗಳನ್ನಾಡಿ ಪೊಲೀಸರು ಅವನ ತಲೆ ಸವರಿದರು. ಅವರ ನಯವಾದ ಮಾತುಗಳನ್ನು ನಂಬಿದ ಪುಟ್ಟ ಮೋಸ ಹೋಗುತ್ತಲೇ ಹೋದ. ಮೂರು ದಿನ ಕಳೆಯಿತು.
ಅವನ ಪ್ರೀತಿ ಪಕ್ಷಿಯ ಪ್ರಾಣ ಹಾರಿ ಹೋಯಿತು. ಶಿಲ್ಪ ಇನ್ನಿಲ್ಲ. ತಾರೀಖು ಮೇ ೧೨!
ಅಂದೇ ರಾತ್ರಿ ಅವಳ ದೇಹವನ್ನು ರಾಮನಗರದಲ್ಲಿ ಅಂತ್ಯಕ್ರಿಯೆ ಮಾಡಲು ಜೊತೆಯಲ್ಲಿ ಒಂದಿಬ್ಬರು ಪೊಲೀಸರು ಬಂದರು. ಅವಳ ದೇಹವನ್ನು ಸುಡುವಂತೆ ಹೇಳಿದರು. ರಾತ್ರಿ ೩.೩೦ರ ಹೊತ್ತಿಗೆ ಅವಳ ದೇಹ ಸುಟ್ಟು ಕರಕಲಾಯಿತು. ಪುಟ್ಟನ ಮನಸ್ಸಿನಲ್ಲಿ ಮೌನ ಆವರಿಸಿತು. ಇದು ಪ್ರೀತಿಗೆ ಸಂಬಂಧಿಸಿದ್ದು, ೭ ವರ್ಷದ ಸಾಂಸಾರಿಕ ಜೀವನದಲ್ಲಿ ಬಾಳಿನುದ್ದಕ್ಕೂ ಜೊತೆಯಲ್ಲಿಯೇ ಇರುತ್ತೇನೆ ಎಂದು ಹೇಳಿ, ನಡುನೀರಿನಲ್ಲಿ ಕೈಬಿಟ್ಟುಹೋದಳಲ್ಲ ಎಂಬುದೆಲ್ಲ ಅವನ ಪ್ರೀತಿಗೆ ನಿಲುಕದ ಪ್ರಶ್ನೆ. ಆದರೆ ಮಾನವೀಯತೆ ಮರೆತ ಪೊಲೀಸರಿಗೆ ಎಲ್ಲಿಂದ ತಿಳಿದೀತು. ಅವರ ಮನೆಯ ಹೆಣ್ಣು ಮಕ್ಕಳಿಗೆ ಇಂತಹ ಶಿಕ್ಷೆಯಾಗಿದ್ದಾರೆ ಏನು ಮಾಡುತ್ತಿದ್ದರು? ಆಗ ಶೌರತ್ವ, ಪುರುಷತ್ವ ಎಲ್ಲ ಒಟ್ಟುಗೂಡುತ್ತಿತ್ತೇನೋ?
ಅಲ್ಲಿಯವರೆಗೂ ಪುಟ್ಟನೊಂದಿಗೆ ನಯವಾಗಿ ವರ್ತಿಸುತ್ತಿದ್ದ ಪೊಲೀಸರು, ತಮ್ಮ ಅಸಲಿ ಮುಖವನ್ನು ಹೊರತೆಗೆದರು. ಅವಳ ದೇಹ ಸುಟ್ಟ ನಂತರ ಪುಟ್ಟನನ್ನು ಪೊಲೀಸ್ ಠಾಣೆಯಲ್ಲಿ ಬಂಧಿಸಿಬಿಟ್ಟರು. ಅವನ ಮೇಲೆ ಇಲ್ಲದ ಸಲ್ಲದ ಆರೋಪಗಳ ಪಟ್ಟಿ ಆಗಲೇ ರೆಡಿಯಾಗಿತ್ತು. ವಿಷ ಕುಡಿದು ಸತ್ತ ಶಿಲ್ಪ ಸಾಯುವ ಮೊದಲು ಒಂದು ಪತ್ರವನ್ನು ಬರೆದಿದ್ದಳು ಎಂದರು.  ಅದರಲ್ಲಿ ಎನಿತ್ತೋ ಏನೋ ತಿಳಿದಿಲ್ಲ. ‘ಪುಟ್ಟ, ಮಗುವನ್ನು ಚೆನ್ನಾಗಿ ನೋಡಿಕೋ, ನನ್ನ ಸಾವಿಗೆ ನಾನೇ ಕಾರಣ.  ನೀನು ಕುಡಿಯುವದನ್ನು ಬಿಟ್ಟೇ ಹೊಡೆಯುವುದನ್ನು ಬಿಡಲಿಲ್ಲ’ ಹೀಗೆ ನಾನಾ ತರದ ಸುಳ್ಳಿನ ಕಥೆಯನ್ನು ಸೃಷ್ಟಿಸಿ ಬಿಟ್ಟರು. ಅವನ ಮೇಲೆಯೇ ಸಂಶಯದ ಸುಳಿಯನ್ನು ಸಿಲುಕಿಸಿಬಿಟ್ಟರು.
ಎಂತಹ ಕಪಟ ನಾಟಕ!
ಅಲ್ಲ; ಅವಳು ರಾತ್ರಿ ೮.೩೦ಕ್ಕೆ ಹೊರಟಿರುವುದಾಗಿ ಹೇಳಿ, ೧೫ ನಿಮಿಷದಲ್ಲಿ ಮತ್ತೊಬ್ಬ ಪೊಲೀಸ್ ಪೇದೆ ಅವಳನ್ನು ಸಂಜೆ ೫ ಗಂಟೆಗೆ ಆಸ್ಪತ್ರೆಗೆ ದಾಖಲು ಮಾಡಿದ್ದೀನಿ ಎಂದರೆ ಅನುಮಾನಗಳು ಶುರುವಾಗುವುದಿಲ್ಲವೇ? ಮೂರು ಆಸ್ಪತ್ರೆಗಳನ್ನು ಬದಲಿಸಿದ್ದಾರೆ. ವಿಷ ಕುಡಿಯುವ ದಿನ ಮಧ್ಯಾಹ್ನ ಅವಳು ತುಂಬಾ ಅಳುತ್ತಿದ್ದಳು, ಅವಳಿಗೆ ಹೊಡೆದು ಬುದ್ದಿ ಹೇಳಬೇಕಾಗಿ ಬಂತು ಎಂಬ ಮತ್ತೊಂದು ಎಪಿಸೋಡ್‌ನಲ್ಲಿ ಹೇಳಿದರು.
ಪೇದೆಯೊಬ್ಬ ಆಟೋದಲ್ಲಿ ಕರೆದುಕೊಂಡು ಹೋಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಯತ್ನಿಸಿದ್ದಾನೆ. ಅದು ವಸಂತನಗರದಲ್ಲಿರುವ ಮಹಾವೀರ ಜೈನ್್ ಆಸ್ಪತ್ರೆಯಲ್ಲಿ. ಮತ್ತೆ ಪೊಲೀಸ್ ಇಲಾಖೆ ದಾಖಲು ಮಾಡಿದ ಆಸ್ಪತ್ರೆ ಕಲಾಸಿಪಾಳ್ಯದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಎಂಬುದು.  ಹೀಗೆ ವಂಚಿಸುತ್ತಾ ಹೋಗುತ್ತಾರೆ.
ಶಿಲ್ಪ ನೋಡಲು ಚೆಂದದ ಹುಡುಗಿ. ಅವಳ ಮೇಲೆ ಬಿದ್ದಿದೆ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಕಾಮುಕ ಅಧಿಕಾರಿಗಳ ಕಣ್ಣು. ಅವಳನ್ನು ಪಡೆಯಲೆತ್ನಿಸಿದ್ದಾರೆ. ಅವರಿಂದ ಪಾರಾಗಲು ಅವಳು ಈ ದುಷ್ಕೃತ್ಯಕ್ಕೆ ಕೈ ಹಾಕಿ, ತೆರೆಣಿಯ ಹುಳು ತನ್ನ ನೂಲನ್ನು ತಾನೇ ಸುತ್ತಿಕೊಂಡು ಸಾವನ್ನಪ್ಪುವ ಹಾಗೆ ಇಂಥ ನೀಚರಿಂದ ಪಾರಾಗಲು ವಿಷ ಸೇವಿಸಿದ್ದಾಳೆ. ಸಾವನ್ನಪ್ಪಿದ್ದಾಳೆ.
ಈ ಸಾವಿಗೆ ನ್ಯಾಯವೆಲ್ಲಿದೆ.
ಮನುಷ್ಯ ಬದುಕಲು ಎಷ್ಟು ಕಷ್ಟ ಪಡಬೇಕು. ಧೈರ್ಯವಾಗಿ ಮುನ್ನುಗಬೇಕು. ಅಷ್ಟೇ ಧೈರ್ಯ ಸಾವಿಗೂ ಬೇಕು. ಅಂತಹ ಕಾರ್ಯಕ್ಕೆ ಅವಳು ಕೈ ಹಾಕಿ ಸಫಲಳಾಗಿದ್ದಾಳೆ. ಇನ್ನು ಪುಟ್ಟನ ಮೊಗದಲ್ಲಿ ಆ ನಗುವಿಲ್ಲ. ಆ ಮುದ್ದು ಕಂದನಲ್ಲಿ ಅಮ್ಮನ ನೆನಪಿನ ಛಾಯೆ ಹಾಗೆ ಉಳಿದು ಹೋಗಿದೆ.
ಇಂದು ಕಥೆ ಕೇಳಿದಂತೆ ಸುಮ್ಮನಾಗುವಾಗಿ ಬಿಡುವ ಜಾಯಮಾನಕ್ಕೆ ಬಂದುಬಿಟ್ಟಿದ್ದೀವಿ. ಬೇಲಿಯೇ ಎದ್ದು ಹೊಲ ಮೇಯ್ದರೆ ಗತಿಯೇನು.... ದುಷ್ಟ ಪೊಲೀಸರೊಂದಿಗೆ, ನಿಷ್ಪಷ್ಟಾವಂತ ಪೊಲೀಸರು ಮರೆಯಾಗುತ್ತಾರೆ.
ಒಟ್ಟಿನಲ್ಲಿ ಪುಟ್ಟನ ನೆಮ್ಮದಿ ಬದುಕಿಗೆ ಶಿಲ್ಪಳ ಪೊಲೀಸ್ ಇಲಾಖೆ ಬೆಂಕಿ ಹಚ್ಚಿತ್ತು. ಅದರೊಟ್ಟಿಗೆ ಶಿಲ್ಪ ಬೆಂದು ಕರಕಲಾದಳು. ಪುಟ್ಟ ಬೇಯುತ್ತಿದ್ದಾನೆ.
ಒಂದು ನೋವಿನ, ಕಳಚಿಬಿದ್ದ ಪ್ರೀತಿಯ, ದುಷ್ಟ ಪೊಲೀಸ್ ವ್ಯವಸ್ಥೆ ನಾಟಕೀಯವಾಗಿ ಕೊಂದ ನಮ್ಮ ಗೆಳತಿ ಶಿಲ್ಪಾಳ ಸಾವಿಗೆ ನ್ಯಾಯ ಎಲ್ಲಿದೆ?
ಅವಳನ್ನು ಕೊಂದ ವ್ಯವಸ್ಥೆಯ ವಿರುದ್ಧ ದನಿ ಎತ್ತದ ನಾವು, ಅವಳ ಆತ್ಮಕ್ಕೆ ಶಾಂತಿ ಕೋರಲು ಅರ್ಹರೇ?

2 comments:

Ittigecement said...

ಪುರುಷೋತ್ತಮ್...

ಬಹಳ ಬೇಸರವಾಯಿತು...
ಈ ಥರಹದ ಸಾವಿಗೆ ನ್ಯಾಯ ಒದಗಿಸಲೇಬೇಕು...
ತಪ್ಪಿಸ್ಥತ್ತರಿಗೆ ಶಿಕ್ಷೆಯಾದಲ್ಲಿ ಆ ಸಾವಿಗೂ ಒಂದು ನ್ಯಾಯ ಸಿಕ್ಕಂತಾಗುತ್ತದೆ...

ಬೆಕ್ಕಿಗೆ ಗಂಟೆ ಕಟ್ಟುವರು ಯಾರು ??

ಸಂಗೀತಾ.ಎಂ said...

ಬಹಳ ಬೇಸರವಯಿತ್ತು ಗೆಳೆಯ.. ನಮ್ಮ ಕಾಮುಕ ಅಧಿಕಾರಿಗಳು, ನೀಚ ಪೊಲೀಸ್ ವ್ಯವಸ್ಥೆ ಇವೆಲ್ಲ ನಮಗೆ ಬೇಕಾ?
ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಮಹಿಳಾ ಪೇದೆಗೆ ಈ ರೀತಿ ಆದರೆ ಇನ್ನು ನಮ್ಮಂಥ ಸಾಮಾನ್ಯ ಮಹಿಳೆಯರ ಸ್ಥಿತಿ ಹೇಗೆ ಎಂಬುದನ್ನು ನೆನೆಸಿಕೊಂಡರೇನೆ ಭಯ ಆಗುತ್ತೆ ನಮ್ಮನ್ನು ಕಾಯುವ ರಕ್ಷಕರೆ ರಾಕ್ಷಸರಾದರೆ ಮನುಸ್ಯಥ್ವಕ್ಕೆ ಎಲ್ಲಿ ಬೆಲೆ ಇದೆ? ಶಿಲ್ಪಳ ಆತ್ಮಕ್ಕೆ ಶಾಂತಿ ಸಿಗಲಿ ತಪ್ಪಿಸ್ಥತ್ತರಿಗೆ ಶಿಕ್ಷೆ ಆಗಲಿ..