Tuesday, July 17, 2012

ಮನುಷ್ಯರಾಗುವ

ಬದಲಾದದ್ದು
ಜಗತ್ತಲ್ಲ;
ನಾನು ನೀನು...
ಚಿವುಟಿದಷ್ಟು
ಗರ್ಭದ ಕಾವಿನಿಂದ
ಹಡೆಯುವ ಆಸೆಗಳು...
ಮೈಗೆ ಮೈ ಅಂಟಿ
ಉಸಿರುಗಟ್ಟುತ್ತಾ
ತೆರೆದುಕೊಳ್ಳುವ ಬಯಕೆಗಳು...

ಬದಲಾದದ್ದು;
ಎದೆಬಿರಿದು ನೊಂದ
ನಿನ್ನ ಕಣ್ಣಿನಲ್ಲಿ ಹರಿದ
ರಕ್ತಸಿಕ್ತ ಹನಿಗಳು..

ಈಗ...
ಬಚ್ಚಿಟ್ಟ ನೋವು, ನಗು
ತುಂಬಿ ಹೇಸಿಗೆ ಹುಟ್ಟಿಸುತ್ತಿವೆ...
ಯಾಕೆ? ಏನು? ಹೇಗೆ?
ಎಂಬ ಪ್ರಶ್ನೆಗಳು ಪ್ರಶ್ನೆಗಳಾಗೇ
ಊಳಿಡುತ್ತಾ...

ಮತ್ತೆ ನಗಬೇಡ
ಗುಳಿಬಿದ್ದ ಕೆನ್ನೆಯ
ಮೇಲೆ ರಕ್ತ ಕಲೆಗಳಂಟಿವೆ!
ಮುಡಿಯೇರಿದ ಹೂ
ನರಳಿ ಘಮಲು ಕಳೆದು ಹೊಸಕಿವೆ!
ಗೂಡು ಕಟ್ಟಿದ ನಿನ್ನೆದೆಯಲಿ
ಮಾಗದ ಗಾಯಗಳೇ ಹೆಚ್ಚು

ಬರೀ ಎದೆಗಪ್ಪಿ ನಟಿಸಬೇಡ
ಒಂದಷ್ಟು ತಾ
ನೋವು, ಯಾತನೆ
ಕರಗಲಿ ನಿನ್ನ ದುಗುಡ

ಕತ್ತಲೊಳಗೆ ಬೆತ್ತಲಾಗುತ್ತಾ
ದಿಗಿಲುತನಗಳನ್ನು ಕೊಡವಿ
ಮನುಷ್ಯರಾಗುವ
ನಾನು ನೀನು..

ಮಳೆ ಹನಿ ತೊಯ್ದ ಕನಸುಗಳಲಿ
ಜೀವಂತ ಉಸಿರಾಟದಲಿ
ನೊಂದ ನೆನಪುಗಳಿಗೆ ಮುಲಾಮು ಹಚ್ಚುತ್ತಾ....

No comments: