Wednesday, August 10, 2011

ಅವ್ವ ಮತ್ತು ಆ ದಿನ ನೆನಪು

ಪ್ಲೇವಿನ್ ಗೇಮ್‌ನಲ್ಲಿ ೫೦ ರೂ. ಬಂತು
ಅದರಲ್ಲಿ ಒಂದಷ್ಟು ಮಾತ್ರೆಗಳನು
ತಂದು ಅವ್ವನಿಗೆ ಕೊಟ್ಟೆ

ಉಬ್ಬಸ, ಉಸಿರುಗಟ್ಟುವಿಕೆಯಲಿ
ಬಳಲಿದ್ದ ಅವ್ವ
ತುಸು ಸುಧಾರಿಸಿದಳು

ಬಡ್ಡಿಮಗಂದು ಒಂದೆರಡು ಲಕ್ಷವಾದರೂ
ಬರ‍್ಬಾರ್ದ ಎಂದು ಸದಾ ಗೊಣಗುತ್ತಾ
ಬಸ್ ಛಾರ್ಜ್‌ಗೆ ಕೊಟ್ಟ
ಹಣವನ್ನು ಪ್ಲೇವಿನ್ ಲಾಟರಿಗೇ ಹೂಡುತ್ತಿದ್ದೆ

ಅದೃಷ್ಟ ನಮ್ಮ ಕೈಯಲ್ಲಿಲ್ಲ
ಹಣೆಬರಹ ಅಳಿಸಿ
ಕಷ್ಟಗಳನ್ನು ಮುಂದಿಡುತ್ತಾನೆ ದೇವರು
ಅದಕಾಗಿ ನಾನು ಅವನನ್ನು ನಂಬುವುದಿಲ್ಲ...

ಅಂದು!
ಇಂದಿಗೂ ಬಳಲಿದ ನೆನಪು
ಅವ್ವ ಹೇಳಿದ ಎಲ್ಲ ಘನ
ಕಾರ್ಯಗಳ ಮಾಡಿ ಮುಗಿಸಿದ
ತೃಪ್ತಿಯ ನೆನಪು
ತುಸು ಬಳಲಕೆ ಅಷ್ಟೆ...

ಒಂದು ತುಂಡ ಮೇಣಸಿನಗಿಡ
ಪಾತಿ ಮಾಡಿದ ಕೆಲಸ
ಒಂದು ಹೊರೆ ಹುಲ್ಲು....
ಮತ್ತೆ ಆಟದ ಮೈದಾನಕ್ಕಿಳಿದು
ಸೋಲು-ಗೆಲುವುಗಳ ಜತೆ
ಸರಸಕೆ ನಿಂತರೆ ಸಾಕು
ಗೆಲ್ಲಲೇಬೇಕೆಂಬ ಹಠ....
ಅಷ್ಟು ಸಾಕು ಅಂದಿಗೆ

ಹೊಟ್ಟೆ ಚುರುಗುಟ್ಟುತಿದೆ
ಕೋಣೆಗೆ ಬಂದು ನಿಂತರೆ
ಅವ್ವ ಮುದ್ದೆ ಮಾಡಲು ಪಡುತ್ತಿದ್ದ
ಪಾಡು ಕಂಡೆ...
ನಾನೇ ಕವಡುಗೋಲು ಹಿಡಿದು
ಹತ್ತಿಪ್ಪತ್ತು ಸುತ್ತು ತಿರುವಿ
ಅವ್ವನ ಕಡೆ ದಿಟ್ಟಿಸಿ
ಹೆಮ್ಮೆಯಿಂದ ಬೀಗಿದೆ...

ಅವಳ ಕಣ್ತುಂಬಾ ನನ್ನದೇ ಬಿಂಬ
ಮುಸುಕು ಮುಸುಕಾಗಿ
ಕಣ್ಣ ಹನಿಗಳಂತೆ ಜಾರುತ್ತಿತ್ತು
ಧನ್ಯತೆಯ ಭಾವ ತುಂಬಿಕೊಂಡಿದ್ದಳು

ರಾತ್ರಿ....
ನಿಶ್ಬಬ್ದ, ಮೌನ ಎರಡೂ
ಅಪ್ಪನ ಗೊರಕೆಗೆ
ಹಿರಿದುಕೊಂಡು ಕೊಲ್ಲಲ್ಪಟ್ಟವು
ನನ್ನ ಗಾಢ ನಿದ್ರೆಗೆ
ಒಂದಿನಿತೂ ಕೇಳದೇ
ಮುಂಜಾನೆ ಚೀರಿ ಸಾವು ಕಂಡಿವೆ
ಎಂಬ ಸುದ್ದಿ ತಿಳಿಯಿತು...

ಆಗ ಅವ್ವ ಇನ್ನೂ
ಮಲಗೇ ಇದ್ದಳು...
ಚಿರ ನಿದ್ರೆಯಲ್ಲಿ...
ನಾನು ಗಾಢ ನಿದ್ರೆಯಿಂದೆದ್ದು ಎಬ್ಬಿಸಿದರೂ
ಅವ್ವ ಏಳಲೇ ಇಲ್ಲ...

ಈ ಪಾಪಿಯ ಕಣ್ತುಂಬ ಹೊತ್ತು
ಕಣ್ಣೀರ ಮಾತ್ರ ಹಡೆದು
ಅವಳು ಚಿರಶಾಂತಿಯಲ್ಲಿ ಲೀನಳಾದಳು...

ಈ ಸತ್ಯ ಯಾರಿಗೂ ತಿಳಿಯಲೇ ಇಲ್ಲ
ಆಗ ನನಗೂ ಕೂಡ...
ಈಗ ಗೋಚರಿಸಿದೆ
ಅವ್ವನ ಭಾವಚಿತ್ರದಲ್ಲರಳಿದ ಕಣ್ಣಗಳಲ್ಲಿ...

1 comment:

Aatish Bhavishattu said...

ಪುರು, ತಾಯಿಯ ಅಗಾಧ ಪ್ರೀತಿ, ಆಕೆಯ ತ್ಯಾಗವನ್ನು ಪದಪುಂಜಗಳಲ್ಲಿ ಬಿತ್ತರಿಸಿದ್ದಕ್ಕ್ಆಗಿ ನೈಸ್...