Wednesday, April 25, 2012

ಡಬ್ಬಿಂಗ್ ಪರ ಮತ್ತು ವಿರೋಧ, ಸಾರ್ವಜನಿಕ ಚರ್ಚೆಯಾಗಲಿ...?

ಡಬ್ಬಿಂಗ್ ಬೇಡ ಎಂದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜನಗಳ ಮನಸ್ಥಿತಿ ಬಾವಿಯೊಳಗೆ ಅವಿತಿರುವ ಕೂಪಮಂಡೂಕಿನಂತಾಗಬಾರದು. ಅದರ ವಿಸ್ತಾರ ಜಗದಗಲ ಹರಡಲಿ. ಬೇಕು ಎಂದು ಕಾರ್ಮಿಕರ, ತಂತ್ರಜ್ಞರ ಬದುಕಿನ ಪ್ರಶ್ನೆಗೆ ಮುಳುವಾಗಬಾರದು. ಅವರ ಬದುಕನ್ನು ಬೇರೆಯದೇ ಉದಾಹರಣೆ ಕೊಟ್ಟು ಕವಾಡೆಯಾಟವಾಡಬಾರದು.

ಕನ್ನಡ ಚಿತ್ರರಂಗ ಡಬ್ಬಿಂಗ್ ಅನ್ನು ವಿರೋಧಿಸಿದ ಮಾತ್ರಕ್ಕೆ ಅದು ಅಸಂವಿಧಾನವಾಗುವುದಿಲ್ಲ. ಪ್ರಜಾಪ್ರಭುತ್ವದ ವಿರೋಧಿಯಾಗುವುದಿಲ್ಲ. ಪರಭಾಷಾ ಚಿತ್ರವನ್ನು ಡಬ್ ಮಾಡುವುದರಿಂದ ಕನ್ನಡ ಚಿತ್ರರಂಗದಲ್ಲಿ ಹಗಲಿರುಳು ದುಡಿಯುವ ತಂತ್ರಜ್ಞರು, ಅದನ್ನೇ ಬದುಕಾಗಿ ಅವಲಂಬಿಸಿಕೊಂಡಿರುವ ದಿನಗೂಲಿ ಮತ್ತು ಕಾರ್ಮಿಕರ ಕೆಲಸವನ್ನಷ್ಟೆ ಟಾರ್ಗೆಟ್ ಮಾಡುವುದು ಎಷ್ಟು ಸರಿ? ಇದರಲ್ಲಿ ಅವರ ಬದುಕಿನ ಪ್ರಶ್ನೆಯೂ ಅಡಗಿದೆ ಎಂಬುದು ಯಾಕೆ ಅರ್ಥವಾಗುತ್ತಿಲ್ಲ. ಬೇಕು! ಸೃಜನಶೀಲ ಪರಭಾಷಾ ಚಿತ್ರಗಳು, ಧಾರಾವಾಹಿಗಳು ಕನ್ನಡ ಜನ ಕನ್ನಡದ ರೂಪದಲ್ಲಿ ನೋಡಬಯಸುವವರಾದರೆ ಅದು ಸ್ವಾಗತಾರ್ಹ. ಸ್ವಪ್ರತಿಷ್ಠೆ ಸ್ವರೂಪಗಳು ರೂಪಾಂತರಗೊಂಡು ಕನ್ನಡದ ಚಿತ್ರರಂಗದ ಮೇಲೆ ಸವಾರಿ ಮಾಡುವುದು ಕೂಡ ಕೆಡುಕಿನ ಮತ್ತೊಂದು ದಾರಿ.

ಟೈಟಾನಿಕ್್ನಂತ ಸಿನಿಮಾಗಳನ್ನು ಕನ್ನಡದಲ್ಲಿ ನೋಡಬೇಕೆಂಬ ಉತ್ಸುಕತೆ ನಮಗೂ ಇದೆ. ಆದರೆ ಅಲ್ಲಿನ ವೇಷಭೂಷಣ ಮಕ್ಕಳ ಮೇಲೆ ಪರಿಣಾಮ ಬೀರಬಹುದೇನೋ ಎಂಬ ಭಯವಿದೆ. ಬರೀ ಡಬ್ಬಿಂಗ್್ನಿಂದಾಗಿ ಕಾರ್ಮಿಕ, ತಂತ್ರಜ್ಞರಿಗೆಷ್ಟೆ ನಷ್ಟವೆಂಬುದು ಬಿಟ್ಟು ಅದರ ತಿರುಳಿನಿಂದ ಕನ್ನಡ ಚಿತ್ರರಂಗದ ಮೇಲಾಗುವ ಪರಿಣಾಮವನ್ನು ಮನಗಾಣಬೇಕು. ಮೇಲಾಗಿ ಕನ್ನಡ ಚಿತ್ರರಂಗದ ಮಾರುಕಟ್ಟೆ ಸೀಮಿತ ಪ್ರದೇಶದವರೆಗೆ ಮಾತ್ರ ಉಳಿದುಬಿಟ್ಟಿದೆ. ಅದರ ವಿಸ್ತಾರ ಕ್ಷೇತ್ರ ಚಿಕ್ಕದ್ದು. ಕರ್ನಾಟಕದಲ್ಲಿ ಎಲ್ಲ ಭಾಷಿಗರು ಇದ್ದಾರೆ. ಅದರಲ್ಲಿ ಪರಭಾಷಿಕರು ಕನ್ನಡ ಚಿತ್ರಗಳನ್ನು ನೋಡುವುದು ವಿರಳ. ಅವರಿಗೆ ತಮ್ಮ ಭಾಷೆಗಳ ಚಿತ್ರಗಳೇ ಹೆಚ್ಚು ಆಕರ್ಷಿಸಿವೆ. ಆಕರ್ಷಿದ ಚಿತ್ರಗಳೆಲ್ಲಾ ಗುಣಮಟ್ಟ ಚಿತ್ರಗಳೇ ಆಗಿದ್ದರೂ ಅದರಲ್ಲಿಯೂ ಮಚ್ಚು ಲಾಂಗುಗಳು ವಿಜೃಂಭಿಸಿವೆ. ಐಟಂ ಸಾಂಗ್‌ಗಳಿವೆ.

ಅನೇಕ ಬಾರಿ ಕನ್ನಡದ ಚಿತ್ರಗಳಿಗೆ ಕರ್ನಾಟಕದಲ್ಲಿಯೇ ಥಿಯೇಟರ್ ಕೊರತೆ ಎದುರಿಸುವಂತ ಸಂದರ್ಭಗಳು ಬಂದಿವೆ. ಹಾಗಂತ ಕನ್ನಡದಲ್ಲಿ ಐಟಂ ಸಾಂಗ್ ಇಲ್ಲದ ಚಿತ್ರಗಳಿಲ್ಲ ಅಂತ ಅಲ್ಲ. ಸೃಜನಶೀಲತೆಯುಳ್ಳ, ಗುಣಮಟ್ಟವುಳ್ಳ ಚಿತ್ರಗಳು ಹೊರತಂದರೂ ಥಿಯೇಟರ್ ಮುಂದೆ ನಿಲ್ಲಲ್ಲು ಆಗದೇ ಸಿದಾ ಟಿವಿಯಲ್ಲಿ ವಿಜೃಂಭಿಸಿವೆ. ಕಲಾತ್ಮಕ ಚಿತ್ರಗಳನ್ನು ಥಿಯೇಟರ್‌ನಲ್ಲಿ ಕೂತು ನೋಡುವವರೇ ಇಲ್ಲ. ಅದು ಪ್ರಶಸ್ತಿಯ ಬಾಗಿಲನಲ್ಲಿ ನಿಂತಿರುತ್ತವಷ್ಟೆ. ಇತ್ತೀಚಿಗಂತೂ ಕನ್ನಡ ಚಿತ್ರಗಳಲ್ಲಿ ಸಪೂರ ಕಥೆ, ಚಿತ್ರಕಥೆ, ವಿಚಿತ್ರ ಗೀತ ರಚನೆ ಇನ್ನೂ ಹೀಗೆ ಹಲವು ಕಾರಣಗಳಿಂದ ಚಿತ್ರಗಳು ಮೇಲೇಳು ಆಗದೇ ಮಕಾಡೆ ಮಲಗಿವೆ.

ಇಂತಹ ಸಂದರ್ಭದಲ್ಲಿ ಪರಭಾಷೆ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ಎನ್ನಡ ಇದು ಕನ್ನಡವೆಂದರೇ ಹೇಗೆ ಸಾಧ್ಯ? ಹಾಗಂತ ಇದು ಕನ್ನಡ ಚಿತ್ರರಂಗದ ಪಾಲಾಯನವಾದವಲ್ಲ. ಇಂದಿನ ಜಾಗತೀಕರಣದ ತಾಪಕ್ಕೆ ರೈತರು ನಲುಗಿದ್ದು, ಕುಡಿಯುವ ನೀರಿಲ್ಲದೆ ಜಾನುವಾರುಗಳು ನರಳುತ್ತಿರುವುದು, ಉಡಲು ಬಟ್ಟೆಯಿಲ್ಲದೇ, ಉಣಲು ಊಟವಿಲ್ಲದೆ ಜೀವಿಸುತ್ತರುವುದು ಸುಳ್ಳಲ್ಲ ತಾನೆ? ಹಾಗಂತ ಯಾರು ಸುಮ್ಮನೆ ಕೈ ಕಟ್ಟಿ ಕುಳಿತುಕೊಂಡಿಲ್ಲ. ಜಾಗತೀಕರಣದ ಬಿಸಿಗೆ ತಕ್ಕ ಸವಾಲನ್ನೊಡಿಕೊಂಡು ಬದುಕು ನಡೆಸುತ್ತಿದ್ದಾರೆ. ಅದೇ ರೀತಿಯಲ್ಲಿ ಜಾಗತೀಕರಣದ ಮತ್ತೊಂದು ಮುಖದಂತಿದೆ ಡಬ್ಬಿಂಗ್.  ಪರಭಾಷಾ ಚಿತ್ರಗಳ ವಿರುದ್ಧ ಕನ್ನಡ ಚಿತ್ರರಂಗಕ್ಕೂ ಆರೋಗ್ಯಕರ ಸ್ಪರ್ಧೆ ಬೇಕು. ನಮ್ಮಲ್ಲೂ ಉತ್ತಮ ನಿರ್ದೇಶಕರಿದ್ದಾರೆ. ಉತ್ತಮ ಬರಹಗಾರರಿದ್ದಾರೆ. ಉತ್ತಮ ತಂತ್ರಜ್ಞರಿದ್ದಾರೆ. ಅವರು ಸೃಜನಶೀಲತೆಯನ್ನು ಕಾಯ್ದುಕೊಂಡು ಉತ್ತಮ ಚಿತ್ರಗಳನ್ನು ನಿರ್ಮಾಣ ಮಾಡಬೇಕು. ಅದ್ಧೂರಿಗಿಂತ ಚಿತ್ರದ ಗುಣಮಟ್ಟವುಳ್ಳ ಚಿತ್ರಗಳು ಬೇಕು. ಅದು ಪ್ರತಿ ಹಳ್ಳಿಗಳಿಗೂ ತಲುಪಬೇಕು.

ಡಬ್ಬಿಂಗ್ ಮಾಡುವುದರಿಂದ ಕನ್ನಡ ಭಾಷೆಗೂ ಕುತ್ತು ಬರಲಿದೆ ಎಂಬ ಮಾತುಗಳಿವೆ. ಆ ಮಾತಿನಲ್ಲಿ ಹುರುಳಿಲ್ಲ. ಕನ್ನಡಕ್ಕೆ ತನ್ನದೇ ಗತಕಾಲದ ಇತಿಹಾಸವಿದೆ. ಕನ್ನಡ ಪ್ರತಿ ಕನ್ನಡಿಗನ ಅಂತಃಶಕ್ತಿಯಾಗಿ ಹರಿಯುತ್ತಿದೆ. ಅದು ಕನ್ನಡಕ್ಕಿರುವ ಶಕ್ತಿ. ಆ ಶಕ್ತಿಗೂ ಡಬ್ಬಿಂಗ್ ಭೂತಕ್ಕೂ ವ್ಯತ್ಯಾಸ ಕಲ್ಪಿಸುವುದು ಸಮಂಜಸವಲ್ಲ. ಭಾಷೆ ಬದಲಾಯಿಸುವ ಡಬ್ಬಿಂಗ್, ಪಾತ್ರಗಳ ತುಟಿಯ ಚಲನವಲನಗಳಲ್ಲಿ ಏಕರೂಪತೆಯನ್ನು ಸಾಧಿಸುವುದು ಕಷ್ಟಕರ. ಇದು ನೋಡುಗರಿಗೂ ತುಸು ತಾಸ್ರವೇ ಆದರೂ ಹೊಸ ಪ್ರಪಂಚವನ್ನು ಅದರ ಭಾವದ ವಿಸ್ತಾರತೆಯನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ. ಅದನ್ನು ಒಪ್ಪುತ್ತೇವೆ.

ಇದು ಸಾರ್ವಜನಿಕವಾಗಿ ಚರ್ಚಿತವಾಗಬೇಕಾಗಿರುವ ವಿಚಾರ. ಬೇಕೆನ್ನುವವರೂ ಬೇಡವೆನ್ನುವವರು ನಡುವೆ ಕನ್ನಡಿಗರು ನಲುಗದಿರಲಿ. ಭಾರತದಿಂದ ಕರ್ನಾಟಕವಲ್ಲ; ಕರ್ನಾಟಕದಿಂದ ಭಾರತ. ಅದುವೇ ಒಕ್ಕೂಟ ವ್ಯವಸ್ಥೆ. ಈ ಒಕ್ಕೂಟ ವ್ಯವಸ್ಥೆಯಲ್ಲಿ ಡಬ್ಬಿಂಗ್ ನಿಷೇಧಿಸುವ ಹಕ್ಕು, ಸ್ವಾಗತಿಸುವ ಹಕ್ಕು ಅವರವರಿಗೆ ಬಿಟ್ಟಿದ್ದಲ್ಲ. ಅದು ಮನರಂಜನೆಗೆ ಸೀಮಿತ. ಆ ಸೀಮಿತದ ಭಾವ ವಿಸ್ತಾರಗೊಳ್ಳಲಿ... ಡಬ್ಬಿಂಗ್ ಪ್ರಜಾಪ್ರಭುತ್ವದ ಪ್ರಶ್ನೆಯಂತೂ ಅಲ್ಲವೇ ಅಲ್ಲ. ಸಂವಿಧಾನ ಬಾಹಿರವೂ ಅಲ್ಲ. ಅದರ ಪರಿಣಾಮ, ಪರಿಸರ, ವೇಷಭೂಷಣ, ಸ್ಥಿತಿ ಕನ್ನಡ ಚಿತ್ರರಂಗದ ಮೇಲೆ ಬೀರುವ ಪ್ರಭಾವ ಎಲ್ಲವೂ ಸೇರಿಕೊಂಡಿರುತ್ತೆ.


ಡಬ್ಬಿಂಗ್ ಬೇಕು ಎಂದು ಕೂಗುವ ದನಿ ಹಿಂದೆಯೂ ಬೇಡ ಎಂಬ ಕಿರಲು ಸದ್ದು ಕೇಳಿಬರುತ್ತಿದೆ. ಅದು ಸಾರ್ವಜನಿಕವಾಗಿ ಚರ್ಚಿಗೆ ಬಂದಾಗ ಡಬ್ಬಿಂಗ್ ನಿಷೇಧದ ಕುರಿತು ಉತ್ತರ ಕಂಡುಕೊಳ್ಳಲು ಸಾಧ್ಯವಾಗಬಹುದು. ಒಂದು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿ, ಅದರ ಸಾಧಕ-ಬಾಧಕಗಳನ್ನು ವಿಶ್ಲೇಷಿಸಿ ತೀರ್ಮಾನಿಸುವುದು ಒಳಿತಲ್ಲವೇ..?

No comments: