Sunday, January 13, 2013

ಕನಸು





ಅದೆಷ್ಟು ಕನಸುಗಳನು
ಹೂತ್ತಿಟ್ಟೆ
ನನ್ನೆದೆಯೊಳಗಿಳಿದು...
ಬಣ್ಣವಿಲ್ಲ, ರೂಪವಿಲ್ಲ
ಬಲೆಗೆ ಬಿದ್ದ
ಹೆಬ್ಬುಲಿಯಂತೆ
ಕನಲುತ್ತಿದ್ದೇನೆ


ಯಾರೋ ಕೂಗಿದ ಸ್ವರ
"ಹೆಣ ಹೆತ್ರಪ್ಪಾ, ಹೊತ್ತಾತು"
ಹೆಸರಿದ್ದವ; ಜತೆಯಲಿದ್ದವ
ಪ್ರೀತಿಸಿದವ
ಸತ್ತ ಮರುಗಳಿಗೆಯಲಿ
ಹೆಣವಾದನೆಂದು
ಮನಸು ಮರುಗಿತು


ಅಲ್ಲೊಬ್ಬ ವ್ಯಕ್ತಿ

ಕುರುಚಲು ಗಡ್ಡ, ಗಿಡ್ಡ ದೇಹ
ಗುಳಿ ಸೇರಿದ ಕಣ್ಣು
ಬಾಗಿದ ಬೆನ್ನು, ಮೂಳೆಗಳೆಲ್ಲ
ಮೈ ಸೀಳಿ, ಹೊಟ್ಟೆ ಬೆನ್ನಿಗಂಟಿದೆ

ಬೀಸಾಡಿದ ಕಸ, ಕಾಗದ
ಪ್ಲಾಸ್ಟಿಕ್ ಚುರುಗಳನು
ಆಯ್ದು, ಹೊತ್ತು ಸಾಗಿದ್ದಾನೆ
ಯಾವ ಕಡೆಗೋ, ಯಾವ ದಿಕ್ಕಿಗೋ


ತಾವಿಲ್ಲದೆ, ಸೂರಿಲ್ಲದೆ
ಬಳಲಿದ ಅಲೆಮಾರಿ ನಾನು
ಬೆಚ್ಚಗೆ ನಿನ್ನೊಳಗಿಳಿದು
ಯಾವುದೋ ಹುಡುಕಾಟ
ನಡೆಸುತ್ತಿದ್ದೇನೆ
ನೀನು ನಭವನ್ನೇ ದಿಟ್ಟಿಸುತ್ತಿದ್ದಿ
ಗುಡುಗು, ಸಿಡಿಲಿಗೆ
ಮೋಡ ಚದುರಿ
ಭೂವಿಗೆ ಇಳೆ ತರುವ ಕಾಯುವಿಕೆಯಲಿ...

ನಾನೋ...
ಸಮುದ್ರದಲೆಗಳು ಅಪ್ಪಳಿಸುವಂತೆ
ನಿನ್ನೊಳಗೆ ಮತ್ತೂ...
* * *
 ಗೆಜ್ಜೆಯ ಸದ್ದು ಕಳಚಿ ಬಿತ್ತು!

No comments: