Tuesday, June 21, 2011

ಕವಿತೆಗಾಗಿ ಕಾದುಕಾದು

ಕವಿತೆಗಳು ನನ್ನಲ್ಲೇಕೆ
ಹುಟ್ಟುವುದಿಲ್ಲ; ಗರ್ಭಧರಿಸುವುದಿಲ್ಲ

ಬಂಜೆಯೆಂದು ನನ್ನೆದೆಯ
ಬಿರುಕುಗಳಿಗೆ ತಿವಿಯುತ್ತಿರುವ
ಯಾತನೆಯ ಸೃಷ್ಟಿಯಾದರೂ
ಎಲ್ಲಿಯದು?

ಕಂಡಕಂಡ ಮಕ್ಕಳನ್ನು
ನನ್ನದೆಂದು ಆತುಕೊಳ್ಳುವ
ಮನಸ್ಸಿಗೆ ಕಾರಿರುಳ
ಶಾಪವಾದರೂ ಎಲ್ಲಿಯದು?

ನನ್ನವಲ್ಲ ಅವು;
ನನ್ನದೇ ಎಂಬ
ಭ್ರಾಂತು ತುಂಬಿ
ಕೊರಗುವ ಬಂಜರು ನೆಲದಲಿ
ಹಾಸಿಹೊದ್ದು ಬಿತ್ತಿದರೂ
ಸುಡುಬಿಸಿಲ ತಾಪಕ್ಕೆ ಮೈಯೊಡ್ಡಿದರೂ
ಮಳೆ ಕಾಣಲಿಲ್ಲ
ಮೋಡ ಒಡೆಯಲಿಲ್ಲ
ಉಸಿರುಗಟ್ಟುತ್ತಿದೆ
ಈ ನೆಲದಲ್ಲಿ
ಚಿಗುರೊಡೆಯುವ
ಕವಿತೆಗಾಗಿ ಕಾದು ಕಾದು....

No comments: