Thursday, April 26, 2012

ಪರಭಾಷೆ ‘ಮನರಂಜನೆ ರೂಪದ ಸಾಂಸ್ಕೃತಿಕ ದಾಳಿ’ಯಾದರೆ, ಡಬ್ಬಿಂಗ್ ಮತ್ತೇನು?

ಡಬ್ಬಿಂಗ್ ಈ ಖಾಲಿ ಬಾಕ್ಸ್್ನಲ್ಲಿ ಸೇರಿಬಿಡಲಿ...



ಪರಭಾಷಾ ಚಿತ್ರಗಳನ್ನು ನೋಡಿದಾಗ ಆ ಭಾಷೆಯ ಹೇರಿಕೆಯೂ ಕನ್ನಡಿಗರ ಮೇಲೆ ಏರಿದಂತೆ. ನಮ್ಮ ನಾಡಿನ ಉದ್ದಿಮೆ, ಭಾಷೆ, ಸಂಸ್ಕೃತಿಗಳನ್ನೆಲ್ಲಾ ಕಾಪಾಡಿಕೊಳ್ಳೋ ಮೂಲಭೂತ ಹಕ್ಕು ನಮಗಿದ್ದೇ ಇದೆ. ಅದು ಮನರಂಜನೆ ರೂಪದ ಸಾಂಸ್ಕೃತಿಕ ದಾಳಿ.
- ಹೀಗೆ ಪರಭಾಷ ಚಿತ್ರಗಳ ಕುರಿತು ನೀವು ಹೇಳುತ್ತೀರಿ. ಹಾಗಾದರೆ ಡಬ್ಬಿಂಗ್ ಅಂದರೆ ಮತ್ತೇನು?
ಅದು ಸಾಂಸ್ಕೃತಿಕ ದಾಳಿಯ ಮತ್ತೊಂದು ರೂಪವಲ್ಲವೇ? ನಮ್ಮ ಸಂಸ್ಕೃತಿಗೆ, ಉದ್ದಿಮೆಗೆ ಮತ್ತು ಉದ್ಯೋಗಕ್ಕೆ ಎರವಾಗುವಂತ ಹಲವು ಲಕ್ಷಣಗಳನ್ನು ಹೊಂದಿಲ್ಲವೇ. ಡಬ್ಬಿಂಗ್ ಸಂಸ್ಕೃತಿಯಿಂದಾಗಿ ಕನ್ನಡ ಚಿತ್ರರಂಗಕ್ಕೆ ಆಗುವ ನಷ್ಟಕ್ಕೆ ಹೊಣೆಗಾರರ್ಯಾರು? ಅಲ್ಲಿನ ತಂತ್ರಜ್ಞರ, ಕಲಾವಿದರ ಬದುಕಿನ ಕಥೆಯೇನು? ಅದರ ಅವಶ್ಯಕತೆ ನಮಗಿದೆಯೇ?

ಪರಭಾಷೆಗಳಿಂದ ಕನ್ನಡಕ್ಕೆ ಡಬ್ ಆದ ಚಿತ್ರಗಳನ್ನು ನಾವು ನೋಡುತ್ತ ಇದ್ದಾರೆ. ಅಲ್ಲಿನ ಪರಿಸರಕ್ಕೆ ಒಗ್ಗುವುದು, ನಾಯಕನಟಿಯರ ಗೀಳು ಹೆಚ್ಚಿಸಿಕೊಳ್ಳುವುದು, ಪರಭಾಷಾ ಚಿತ್ರಗಳ ಮಾರುಕಟ್ಟೆ ಮತ್ತೂ ವಿಸ್ತಾರಗೊಂಡು ಕನ್ನಡ ಚಿತ್ರ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗುವುದಲ್ಲವೇ?

ಮನರಂಜನೆ ಯಾರೊಬ್ಬರ ಸ್ವತ್ತಲ್ಲ. ಎಲ್ಲರಿಗೂ ದಕ್ಕಬೇಕು, ದಕ್ಕಿಸಿಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಪ್ರತಿಯೊಬ್ಬರ ಹಕ್ಕಿಗೂ ಒಂದು ಅರಿವಿದೆ. ಆ ಅರಿವು ಏಕರೂಪತೆ ಹೊಂದಿರುತ್ತದೆ. ಡಬ್ಬಿಂಗ್‌ನಿಂದ ರೂಪಾಂತರಗೊಂಡ ಪರಭಾಷಾ ಚಿತ್ರ, ಅದರಲ್ಲಿ ಒಳಗೊಂಡಿರುವ ಪರಿಸರ, ವೇಷಭೂಷಣ, ನಾಯಕನಟಿಯರ ನಟನೆ, ವರ್ತನೆ ನೋಡುಗರ ಮೇಲೆ ಏಕರೂಪತೆಯನ್ನು ಸಾಧಿಸಲಾಗುವುದಿಲ್ಲ.

ಪರಭಾಷಾ ಚಿತ್ರವೊಂದು ಬೇರೆ ಭಾಷೆಯಲ್ಲಿ ಡಬ್ ಮಾಡಿದ ಚಿತ್ರವನ್ನೇ ಗಮನಿಸಿ. ತುಟಿಯ ಚಲನೆಗಳಲ್ಲಿ ಕಂಡುಬರುವ ಲೋಪದೋಷಗಳಿಂದಾಗಿ ಚಿತ್ರ ಆಸಕ್ತಿ ಕಳೆಗುಂದುತ್ತದೆ ಎಂಬುದು ಹಲವರ ಅಭಿಪ್ರಾಯ. ಅಂತಹುದರಲ್ಲಿ ಕನ್ನಡಕ್ಕೆ ಡಬ್ ಆದಾಗ ಆ ಲೋಪಗಳನ್ನು ಎದುರಿಸುವುದು ಕಷ್ಟಕರವೇ. ನಮ್ಮ ತಂದೆಗೋ, ನಮ್ಮ ಮಕ್ಕಳಿಗೋ, ನಮ್ಮ ಅಜ್ಜಿಗೋ ತೋರಿಸಬೇಕೆಂಬ ಡಬ್ ಚಿತ್ರ ಯಾವ ರೀತಿಯಲ್ಲಿ ಪರಿಣಾಮಕಾರಿಯುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅವರನ್ನು ನಾವೇ ದಾರಿತಪ್ಪಿಸಿದಂತಾಗುತ್ತದೆಯಲ್ಲವೇ?

ಡಬ್ಬಿಂಗ್ ಬಂದರೆ ಎಲ್ಲವೂ ಕನ್ನಡಮಯವಾಗುತ್ತದೆಂದು ಕೆಲವರು ಪರಿಭ್ರಮಿಸುತ್ತಿದ್ದಾರೆ. ಇದರಿಂದಾಗಿ ಬೇರೆ ಭಾಷೆಯ ಕಲಿಕೆ ಮಾರ್ಗವನ್ನು ನಮ್ಮ ಮಕ್ಕಳಿಗೋ, ನಮ್ಮ ಕುಟುಂಬಕ್ಕೋ ತಪ್ಪಿಸಿದಂತಾಗುವುದಿಲ್ಲವೇ? ಜ್ಞಾನದ ವಿಸ್ತಾರವನ್ನು ಆ ಮೂಲಕ ತಡೆದಂತಾಗುತ್ತದೆಯಲ್ಲವೇ? ನಮ್ಮವರೇ ಆದ ಭೀಮಸೇನ್ ಜೋಷಿ ರಾಗಕ್ಕೂ, ಮತ್ತೊಬ್ಬ ಭಾಷಿಕನ ರಾಗಕ್ಕೂ ನಾವು ಕಿವಿಗೊಡುತ್ತೇವೆ. ಅದರಲ್ಲಿಯೇ ತಲೀನರಾಗುತ್ತೇವೆ, ಮುಳುಗುತ್ತೇವೆ. ಅಲ್ಲಿ ಭಾಷೆ ಬದಲಾಗಿದೆ. ಅವರವರ ಭಾಷಿಗರಿಗೆಯೇ ಸ್ಪಷ್ಟವಾಗಿ ಆ ಹಾಡಿನ ಅರ್ಥ ತಿಳಿದಿರುವುದಿಲ್ಲ. ಆದರೆ ಸಂಗೀತದ ಭಾವ ಮೈಮರೆಸುತ್ತದೆ. ಅದಕ್ಕೀದೆ ಆ ಶಕ್ತಿ. ಆ ಸಂಗೀತದ ವಿಸ್ತಾರ ಭಾಷೆಗಿಂತಲೂ ಮಿಗಿಲುಗೊಂಡು ಭಾವದ ರೂಪ ತಳೆಯುತ್ತದೆ. ಅದೇ ರೀತಿ ಪರಭಾಷೆಯ ಚಿತ್ರವನ್ನು ನೋಡುವುದಕ್ಕೆ ಭಾಷೆಯ ಹಂಗು ಯಾಕೆ ಬೇಕು? ಭಾವ ಸಾಕಲ್ವೇ? ಭಾಷೆಗಿಂತ ಭಾವ ಪ್ರಾಮುಖ್ಯತೆ ಪಡೆದಿರುವುದರಿಂದ ಆ ಭಾಷೆಯನ್ನು ಕಲಿಸಲು ಪ್ರೇರಣೆ ನೀಡಿದಂತಲ್ಲವೇ?
ಅದು ಜ್ಞಾನದ ರಾಜಮಾರ್ಗವಲ್ಲವೇ?

ಕೊನೆಯದಾಗಿ
ಸೌಂದರ್ಯ ಎಂಬುದು ಮುಖದಲ್ಲಿ ಇರುವುದಿಲ್ಲ. ಅದು ಹೃದಯದೊಳಗಿನ ಬೆಳಕು
-ಖಲೀಲ್ ಗಿಬ್ರಾನ್
ಆ ಹೃದಯದೊಳಗಿನ ಬೆಳಕು ಭಾವದಿಂದ ತೆರೆದುಕೊಂಡ ಸೌಂದರ್ಯವೇ ಹೊರತು... ಭಾಷೆಯಿಂದಲ್ಲ...

No comments: